Monday, August 2, 2010

ನನ್ನ ಪುನರ್ಜನ್ಮ ವೃತ್ತಾಂತ.

ಅದು 2002 ಜನವರಿ ಎರಡನೇ ವಾರ. ನಾನು PUC ಓದ್ತಿದ್ದೆ ಆಗ. ಒಂದು ವಾರದಿಂದ ನಂಗೆ ಜ್ವರ ಬರ್ತಿತ್ತು, ಮಂಜಪ್ಪ ಡಾಕ್ಟರ್ ಹತ್ತಿರ ಹೋಗೋದು, ಮಾತ್ರೆ, ಇಂಜೆಕ್ಷನ್ ತಗಳೋದು ಕಾಲೇಜಿಗೆ ಹೋಗೋದು ಮಾಡ್ತಾ ಇದ್ದೆ. ಆದ್ರೆ ಜ್ವರ, ಸುಸ್ತು ಕಡಿಮೆ ಆಗ್ಲೇ ಇಲ್ಲ. ಕಾಲೇಜಿಗೆ ಹೋಗದೆ ಮನೇಲೆ ಇದ್ದೆ 2 ದಿನ. ಅಪ್ಪ ನನ್ನ ಡಾಕ್ಟರ್  ಹತ್ತಿರ ಕರ್ಕೊಂಡ್ ಹೋಗಿ ಬರ್ತಾ ಇದ್ರು ತುಂಬಾ ವೀಕ್ನೆಸ್ ಇತ್ತು. ಬ್ಲಡ್ ಟೆಸ್ಟ್, ಅದು, ಇದು ಅಂತೆಲ್ಲ ಟೆಸ್ಟ್ ಆಯ್ತು. ಆದರು ಎಲ್ಲಾ ರಿಪೋರ್ಟ್ normal ಆಗಿತ್ತು. ಆಗ ಮಂಜಪ್ಪ ಡಾಕ್ಟರ್, ' ವಿನಿಯ ಒಂದು bottle ಡ್ರಿಪ್ ಹಾಕ್ಕೊಳ' ಅಂತ ಹೇಳಿದ್ರು. ಬೇಡ ಹೀಗೆ ಕಡಮೆ ಆಗತ್ತೆ ನೀವೇ ಯಾವ್ದಾದ್ರು ಸ್ಟ್ರಾಂಗ್ dose ಮಾತ್ರೆ ಕೊಡಿ  ಅಂತ ನಾನು ಹೇಳ್ದೆ. ಅವ್ರು ಯಾವ್ದೋ ಮಾತ್ರೆ ಬರೆದು ಕೊಟ್ರು. ಮಾರನೆ ದಿನ ಕೂಡ ಹಾಗೆ ಇತ್ತು. ರಾತ್ರಿ ಅಮ್ಮ ಗಂಜಿ ಮಾಡಿ ತಿನ್ಸಿದ್ರು, ಮಾತ್ರೆ ಕೊಟ್ರು ತಗೊಂಡು ಮಲಕ್ಕೊಂಡೆ. ಮಾರನೆ ದಿನ ಬೆಳಗ್ಗೆ 8 ಗಂಟೆಯಿಂದ ಅಮ್ಮ  ನನ್ನ ಎಬ್ಬಿಸ್ತ ಇದ್ರು. 'ಗಂಜಿ ಮಾಡಿದ್ದಿ ಊಟ ಮಾಡ್ಕಂಡು ಮಾತ್ರೆ ತಗ, ಕಡಮೆ ಆಗಲ್ಲೆ ಅಂದ್ರೆ ಡಾಕ್ಟರ ಹತ್ರ ಹೊಪನ್ನ' ಅಂತ ಹೇಳ್ತಿದ್ರು.

ಅಮ್ಮ ನಂಗೆ ಏಳಕ್ಕೆ ಆಗ್ತಾ ಇಲ್ಲೇ ನೀನೆ ಬಂದು ಕರ್ಕಂಡ್ ಹೋಗು, ಇಲ್ದಿದ್ರೆ ಊಟ ಇಲ್ಲಿಗೆ  ತಗಂಡ್ ಬಾ ಅಂತ ಹೇಳ್ದೆ.  ಅಮ್ಮ ಬಂದು ಎದ್ದು ನಿಲ್ಸಿದ್ರು , ನಾನು ಬುಡ ಕಡಿದ ಬಾಳೆ ಮರದ ಹಾಗೆ ಬಿದ್ದೆ.  ಕಾಲಲ್ಲಿ ಶಕ್ತಿನೇ ಇರಲಿಲ್ಲ.(ಹೇಳವನಾಗಿದ್ದೆ) ಅಯ್ಯೋ ನನ್ ಮಗನ ಕಾಲಿಗೆ ಏನೋ ಆಗೋಯ್ತು ಏನಪ್ಪಾ ಮಾಡ್ಲಿ ಈಗ ಅಂತ ಜೋರಾಗಿ ಕೂಗಿಕೊಂಡರು.  ಆ ನನ್ನ ಅಮ್ಮನ  ಆಕ್ರಂದನ ಇನ್ನು ನನ್ನ ಕಿವಿಯಲ್ಲಿ ಗುಯ್ ಅನ್ನತ್ತೆ. ಅಷ್ಟರಲ್ಲಿ ಹಾಲಿನ ಡೈರಿಗೆ ಹೋಗಿದ್ದ ಅಪ್ಪ ಬಂದ್ರು, ಅಕ್ಕ ಪಕ್ಕದ ಮನೆಯವರೆಲ್ಲ ಬಂದ್ರು. ನಮ್ಮೂರಿನ ಪಕ್ಕದ ಊರಾದ ಶ್ರೀಧರಪುರದ ರವಿ ಅಣ್ಣಂಗೆ ಫೋನ್ ಮಾಡಿ, ಅವನ  ಜೀಪ್ನಲ್ಲಿ ನನ್ನ ಸಾಗರಕ್ಕೆ ಕರ್ಕೊಂಡು ಹೋಗೋದು ಅಂತಾಯ್ತು.

ಸಾಗರದಲ್ಲಿ Hegde Nursing Home ಗೆ ಅಡ್ಮಿಟ್ ಮಾಡಿದ್ದರು.  ಅಲ್ಲಿ ಅವ್ರು ಅಷ್ಟೇ ಮತ್ತೆ ಎಲ್ಲಾ ರೀತಿ ಟೆಸ್ಟ್,  x-ray ಮಾಡಿದ್ರು, ಬೇರೆ surgeon ಕರೆಸಿ ಟೆಸ್ಟ್ ಮಾಡ್ಸಿದ್ರು. ಅವರಿಗೂ diagnose ಮಾಡೋಕಾಗಿಲ್ಲ. ಅಷ್ಟರಲ್ಲಿ 2 ದಿನ ಕೆಳೆದೋಗಿತ್ತು. ಇನ್ನೂ  ಜಾಸ್ತಿ ವೀಕ್ ಆಗಿದ್ದೆ ಯಾಕೆ ಅಂದ್ರೆ, ಆ ಡಾಕ್ಟರ್ ಗಳು  ಹೊಟ್ಟೆಗೆ ಏನು ತಿನ್ನೋಕೆ ಕೊಟ್ಟಿರಲಿಲ್ಲ. ಬರಿ ದ್ರಿಪ್ನಲ್ಲೇ ಇಟ್ಟಿದ್ರು. ಅಪ್ಪ ಮೊದಲೇ ಡಾಕ್ಟರ್  ಹತ್ತಿರ ಹೋಗಿ, ' ನಿಮ್ ಹತ್ತಿರ ಆಗಲ್ಲ ಅಂದ್ರೆ ಡಿಸ್ಚಾರ್ಜ್ ಮಾಡಿ. ನಾವು ಶಿವಮೊಗ್ಗ ಅಥವಾ ಮಣಿಪಾಲ್ ಗೆ ಕರ್ಕೊಂಡು ಹೋಗ್ತಿವಿ ಅಂತಿದ್ರು'. ಆದ್ರೆ ಹೆಗ್ಡೆ ಡಾಕ್ಟರ್ 'ಇನ್ನೊಂದು ದಿನ ನೋಡೋಣ ಇಲ್ಲೇ ಇರಲಿ'   ಅಂತ ಹೇಳಿ ಅವ್ರ ಹಾಸ್ಪಿಟಲ್ ಬಿಲ್ ಬಗ್ಗೆ ಯೋಚನೆ ಮಾಡ್ತಾ ಇದ್ರು. ಅಮ್ಮ ನನ್ನ ನೋಡೋಕೆ ಅಂತ ಹಾಸ್ಪಿಟಲ್ ಗೆ ಬಂದೋರು, ಡಾಕ್ಟರಿಗೆ ಬೈದು ಡಿಸ್ಚಾರ್ಜ್ ಮಾಡ್ಸಿ ಶಿವಮೊಗ್ಗಕ್ಕೆ ಕರ್ಕೊಂಡ್ ಹೋಗೋಕೆ ಹೇಳಿದ್ರು.

ಸಾಗರದಿಂದ ಮುರಳಿ ಅಣ್ಣನ ಕಾರಿನಲ್ಲಿ ಶಿವಮೊಗ್ಗಕ್ಕೆ ಕರ್ಕೊಂಡ್ ಹೊರಟರು. ನನ್ ಜೊತೆಗೆ ಅಪ್ಪ, ನಮ್ಮೂರಿನವರೇ  ಆದ ದೇವೇಂದ್ರ ಅಣ್ಣ, ನಮ್ ಪಕ್ಕದ ಮನೆ ಮಂಜುನಾಥಣ್ಣ ಬಂದ್ರು. ಅಷ್ಟರಲ್ಲಿ ನನ್ನ  ಕಣ್ಣು ದೃಷ್ಟಿ ಮಂಜಾಗಿತ್ತು. ಎಲ್ಲದು ಮಸುಕು, ಮಸುಕಾಗಿ ಕಾಣಿಸ್ತಿತ್ತು.
ಶಿವಮೊಗ್ಗದಲ್ಲಿ ಡಾ. ವೆಂಕಟರಮಣ ಅವ್ರ nursing home ಗೆ ಕರ್ಕೊಂಡ್ ಹೋದರು. ಅಲ್ಲಿ ಅವ್ರು ನನ್ನ admit ಮಾಡ್ಕೊಳ್ಳೋಕೆ    
ತಯಾರಿಲ್ಲ. ಕಾರಣ, ಅಲ್ಲಿ admit ಮಾಡ್ಕೊಂಡ್ ಮೇಲೆ ನಾನು ಸತ್ರೆ ಅವ್ರ ಆಸ್ಪತ್ರೆಗೆ ಕೆಟ್ಟ ಹೆಸರು ಬರತ್ತೆ ಅಂತ..!! ಆಗ ಅಪ್ಪ ಏನೆ ಆದರು ನಾವೇ ಜವಾಬ್ದಾರಿ, ನೀವು ಈಗ ಅಡ್ಮಿಟ್ ಮಾಡ್ಕೊಳ್ಳಿ ನಾವು ಡಾ. ಶ್ರೀಕಾಂತ್ ಹೆಗ್ಡೆ consult ಮಾಡಿ ಅವ್ರ ಹತ್ತಿರ treatment ಕೊಡಿಸ್ತೀವಿ  ಅಂದ್ರು.

ಇಷ್ಟೆಲ್ಲದರ ನಡುವೆ ನಮ್ಮೂರಿಗೆ ಯಾವ್ದಾದ್ರೂ ಜೀಪು, ಕಾರು ಬಂದ್ರೆ ವಿನಯನ 'ಹೆಣ' ಬಂತು ಅನ್ಸತ್ತೆ ಅಂತ ಮಾತಾಡ್ತಾ ಇದ್ರಂತೆ.
ನನ್ನ ಅಪ್ಪ, ಅಮ್ಮನು ನಾನು ಉಳಿಯಲ್ಲ ಅನ್ನೋ ತೀರ್ಮಾನಕ್ಕೆ ಬಂದಿದ್ರಂತೆ.(ನಾನು ಹುಷಾರಾಗಿ ಮನೆಗೆ ಬಂದ ಮೇಲೆ ಇದ್ನೆಲ್ಲ ಹೇಳಿದ್ರು)

ಡಾ. ಶ್ರೀಕಾಂತ್ ಹೆಗ್ಡೆ ಬಂದು ಚೆಕ್ ಮಾಡಿದ್ರು, ಕೆಲವು ಟೆಸ್ಟ್ ಮಾಡಿ diagnose ಮಾಡಿದ್ರು. ಈ ಸಮಯದಲ್ಲಿ ನಾನು ಪಟ್ಟಂತಹ ಹಿಂಸೆ, ನೋವು ಮಾತ್ರ ನನ್ನ ಶತ್ರುವಿಗೂ ಬರದೇ ಇರಲಿ ಅನ್ಕೋತೀನಿ.  spinal chord ಗೆ virus attack ಆಗಿದ್ದು ಅಂತ ಹೇಳಿದ್ರು, ಇನ್ನು ಒಂದೇ ಒಂದು ದಿನ ಬಿಟ್ಟು ಬಂದಿದ್ರು ಅಥವಾ ಟ್ರೀಟ್ಮೆಂಟ್ ಇನ್ನೊಂದು ದಿನ ಬಿಟ್ಟು ಶುರು ಮಾಡಿದ್ರು  ನಿಮ್ ಮಗ ಉಳಿತ ಇರಲಿಲ್ಲ ಅಂತ ಅಪ್ಪ ಹತ್ರ ಹೇಳ್ತಿದ್ರು. Transverse Mylatis ಅಂತ ಕಾಯಿಲೆ ಹೆಸರು. ಅದು ಲಕ್ಷಕ್ಕೊಬ್ಬರಿಗೆ  ಬರೋದಂತೆ. ಆ ಅದೃಷ್ಟವಂತ ನಾನೇ ಆಗಿದ್ದೆ..!! ಜೀವ ಉಳಿಸ್ತೀನಿ, ಆದರೆ ಕಾಲು ಮೊದಲಿನ ಹಾಗೆ ಆಗತ್ತೆ ಅನ್ನೋ ಧೈರ್ಯ ಕೊಡಲ್ಲ ಅಂದಿದ್ರು. ನನಗೆ ಜೀವದಾನ ಮಾಡಿದವರು ಡಾ. ಶ್ರೀಕಾಂತ್ ಹೆಗ್ಡೆ. ಮೊನ್ನೆ ಊರಿಗೆ ಹೋದಾಗ ಹೋಗಿ ಮಾತಾಡಿಸ್ಕೊಂಡು ಬಂದೆ ಅವರಿಗೆ ನನ್ನ  ನೆನಪು ಚೆನ್ನಾಗೀನೆ ಇದೆ .
3 ದಿನದ treatment ಆದ್ಮೇಲೆ ನಿಧಾನಕ್ಕೆ  ಕಾಲು ಮಡಚಿ, ಬಿಚ್ಚಿ ಮಾಡ್ತಿದ್ದೆ.  ಜೀವದ ಜೊತೆಗೆ ಕಾಲು ಕೂಡ ಬಂತು ಅನ್ನೋ ಸಮಾಧಾನ ಮತ್ತು ಧೈರ್ಯ  ಅಪ್ಪ, ಅಮ್ಮ ಎಲ್ರಿಗೂ. ಅಮ್ಮ ಹೊತ್ತ ಹರಕೆ ಗಳು, ಅಪ್ಪ ದುಡ್ಡು ಅಡ್ಜಸ್ಟ್ ಮಾಡೋಕೆ ಪಟ್ಟ ಶ್ರಮ ಯಾವ್ದು ಕೂಡ ವ್ಯರ್ಥ ಆಗ್ಲಿಲ್ಲ. ಅಪ್ಪನಿಗೆ ಆಸ್ಪತ್ರೆ ಅಂದ್ರೇನೆ ಆಗ್ತಾ ಇರಲಿಲ್ಲ. ಅಂತ ನನ್ನಪ್ಪ more than 20 days ನನ್ನ ಜೊತೆ ಆಸ್ಪತ್ರೆನಲ್ಲಿ ಕಳೆದರು. ಅಮ್ಮ ಆಗ ಇಡೀ ಮನೆ ಕೆಲಸ, ಕೊಟ್ಟಿಗೆ ಕೆಲಸ (ಮನೆಯಲ್ಲಿ ತುಂಬಾ ದನಕಾರುಗಳಿದ್ದವು ಆಗ) ಮಾಡಿ ನಿಭಾಯಿಸಿ ಕೊಂಡು ಮಗನ ಜೀವ ಉಳಿಸೋಕೆ ಹೋರಾಡಿದರು. ಅವರಿಗೆ ನಾನು ಸೇವೆ ಮಾಡೋ ಅಂತ ಕಾಲದಲ್ಲಿ ಅವ್ರು ನನ್ನ ಸೇವೆ ಮಾಡಿದ್ರು. ಅಪ್ಪ ಇಷ್ಟೆಲ್ಲಾ ದಿನ ಆಸ್ಪತ್ರೆನಲ್ಲಿ ಇದ್ದಿದ್ಕೆ ಎಷ್ಟು ಖರ್ಚಾತು, ದುಡ್ಡು ಹೆಂಗೆ  adjust ಮಾಡ್ದೆ ಅಂತ ಕೆಳಿದ್ಕೆ ಅಪ್ಪ ಹೇಳಿರೋ ಉತ್ತರ, 'ಅದ್ನೆಲ್ಲ ನೀನು ಈಗ ಯೋಚನೆ ಮಾಡಕ್ಕೆ ಹೋಗಡ ಪೂರ್ತಿ ಗುಣ ಆಗು ದುಡ್ಡು  adjust ಆಗ್ತು. adjust ಆಗಲ್ಲೆ ಅಂದ್ರೆ ಒಂದು ದನ(ಹಸು) ಮಾರಾಟ ಮಾಡಿ ಆಸ್ಪತ್ರೆ ಬಿಲ್ ಕೊಡ್ತಿ' ಅಂತ ಹೇಳಿದ್ರು. ಅಂತಹ ತಂದೆ, ತಾಯಿನ ಚೆನ್ನಾಗಿ ನೋಡ್ಕೋಬೇಕು ಅನ್ನೋದೇ ನನ್ನ ಮಹದಾಸೆ.

  

2 comments:

  1. Oey ಹಿಂಗಾಗಿತ್ತು ಅಂತ ಗೊತ್ತೇ ಇರ್ಲ್ಯಲೋ ಮಾರಾಯ

    Sree

    ReplyDelete
  2. This comment has been removed by the author.

    ReplyDelete