Thursday, January 20, 2011

ಮರೆತೇನೆಂದರೆ ಮರೆಯಲಿ ಹ್ಯಾಂಗಾ??

ಮರೆತೇನೆಂದರೆ ಮರೆಯಲಿ ಹ್ಯಾಂಗಾ??

ಜನವರಿ 21, ಇದು ನನ್ನ ಜೀವನದಲ್ಲಿ ಒಂದು ಮರೆಯಲಾರದ ದಿನ. ಎಲ್ಲೊ ಹುಟ್ಟಿ, ಎಲ್ಲೊ ಬೆಳೆದ ಒಬ್ಬಳು ಹುಡುಗಿ ನನ್ನನ್ನು 'ಅಣ್ಣ' ಅಂತ ಹೇಳಿಕೊಂಡು  ನನ್ನ ಜೀವನಕ್ಕೆ  ಕಾಲಿಟ್ಟಿದ್ದಳು. ಈ ದಿನ ಅವಳ ಜನ್ಮದಿನ. ನನಗೆ ಸ್ವಂತ ತಂಗಿ ಇಲ್ಲದೆ ಇರೋದಕ್ಕೆ ಇರಬೇಕು, ಅಣ್ಣ ಅಂತ ಯಾರು ಕರೀತಾರೋ ಅವರು ತುಂಬಾ ಆತ್ಮೀಯರೆನಿಸಿಕೊಳ್ಳುತ್ತಾರೆ. ಅಥವಾ ಅದು ನನ್ನ ದುರ್ಬಲತೆ ಇದ್ದರೂ ಇರಬಹುದು. ಇರುವುದೆಲ್ಲ ಬಿಟ್ಟು ಇರದುದರೆಡೆ  ತುಡಿಯುವುದೇ ಜೀವನ ಅನ್ನೋ ಹಾಗೆ...!!

ಒಂದು ದಿನ ಆರ್ಕುಟ್ನಲ್ಲಿ ಯಾರ ಜೊತೆಗೋ ಚಾಟ್ ಮಾಡುತ್ತಿದ್ದಾಗ 'Hi viniyanna...'   ಅಂತ ಒಂದು scrap ಬಂದು ನನ್ನ ಆರ್ಕುಟ್ಟಿನಲ್ಲಿ ಕುಳಿತಿತ್ತು. (ನನ್ನ ಹಳೆ ಡೈರಿ ತೆಗೆದು ನೋಡಿದ್ರೆ ಆ ದಿನಾಂಕ ಗೊತ್ತಾಗತ್ತೆ. ಆದರೆ ಇಲ್ಲಿ ಅದರ ಅವಶ್ಯಕತೆ ಇಲ್ಲ ಬಿಡಿ.)   ಹೆಸರು  ಮಂಗಳೂರು  ನಕ್ಷತ್ರ  ಅಂತ ಇತ್ತು. ಯಾರಪ್ಪ ಇದು ಅಂತ ತಲೆ ಕೆಡಿಸಿಕೊಂಡು ನೋಡಿದಾಗ, ನಾನು ಚಾಟ್ ಮಾಡಿ ಹೆಸರು ಕೇಳಿದಾಗ, ನಾನು 'ರೋಹಿಣಿ' ಅಂತ ಹೇಳಿ, ಅವಳ ಪರಿಚಯ ಹೇಳಿದ್ಲು.  ಇನ್ನೊಂದು 2-3 ಜನ ನನ್ನ ಫ್ರೆಂಡ್ಸ್ ಅವಳಿಗೂ ಆರ್ಕುಟ್ ಫ್ರೆಂಡ್ಸ್ ಆಗಿದ್ರು. ಮೊದಲ ಬಾರಿಗೆ ಅವಳು ನನ್ನನ್ನು ಅಣ್ಣ ಅಂತ ಕರೆದಿರೋದು  ಅವಳ safety ಗೆ  ಆಗಿರಲೂಬಹುದು. ಮೊದಲು ನಾನು ಕೂಡಾ ಹಾಗೆ ಅಂದುಕೊಂಡಿದ್ದೆ. ಆದರೆ ಅವಳ ಆ ಒಂದು ಅಣ್ಣ ಅನ್ನೋ ಮಾತು ಇಷ್ಟೆಲ್ಲಾ ಗಟ್ಟಿ ಆಗಿ ಉಳಿಯತ್ತೆ ಅಂತ ನಾವಿಬ್ರು ಊಹಿಸಿರಲಿಲ್ಲ ಅನ್ಸತ್ತೆ.

ಕೆಲವು ದಿನ ನಮ್ಮ ಉಭಯಕುಶಲೋಪರಿ ಚಾಟ್ ನಲ್ಲೆ ಆಯ್ತು. ಆಮೇಲೆ ಅವಳು ನನ್ನ ಫೋನ್ ನಂಬರ್ ತಗೊಂಡು ಕಾಲ್ ಮಾಡಿ ಮಾತಾಡೋಕೆ ಸ್ಟಾರ್ಟ್ ಮಾಡಿದ್ಲು. ರೋಹಿಣಿಯ ಅಮ್ಮ, ತಮ್ಮ ಜೊತೆ ಕೂಡ  ನಾನು ಮಾತಾಡ್ತಾ ಇದ್ದೆ ಅವರ ಮನೆ ಸದಸ್ಯನೇ ಆಗಿ ಹೋದೆ. ರೋಹಿಣಿ ಗೆ  ಅಪ್ಪ ಇರಲಿಲ್ಲ. ಜೀವನದಲ್ಲಿ ತುಂಬಾ ಕಷ್ಟಪಟ್ಟ  ಹುಡುಗಿ. ನಾನು ರೋಹಿಣಿಯನ್ನು ಪ್ರೀತಿಯಿಂದ 'ಕಂದಾ' ಅಥವಾ 'ಕಂದಮ್ಮ' ಅಂತ ಕರೀತಿದ್ದೆ. ಅವಳಿಗೂ ತುಂಬಾ ಇಷ್ಟ ಆಗ್ತಿತ್ತು ನಾನು ಹಾಗೆ ಕರಿಯೋದು.  ಎಲ್ಲಾ ವಿಷಯಾನು ಯಾವುದೇ ಮುಚ್ಚು ಮರೆ ಇಲ್ಲದೆ ಮಾತಾಡಿ ಕೊಳ್ಳುತ್ತಾ ಇದ್ದೆವು. ರೋಹಿಣಿ ಕೂಡ ನಮ್ಮನೆಗೆ ಫೋನ್ ಮಾಡಿ, ನನ್ನ ಅಮ್ಮ, ತಮ್ಮ, ಅಪ್ಪ ಜೊತೆ ಮಾತಾಡ್ತಾ ಇದ್ಲು, ನನ್ನ ಅಮ್ಮನಿಗೂ ಮಗಳು ಸಿಕ್ಕಷ್ಟೇ ಖುಷಿ  ಆಗಿತ್ತು. ಅವಳ ವ್ಯಕ್ತಿತ್ವವೇ ಅಂತದ್ದು. ಒಂದು ದಿನ ಮನೆಗೆ ಪೇಪರ್ ಬೇಕಾದ್ರೂ ಮಿಸ್ ಆಗ್ತಿತ್ತು , ಆದರೆ ನನ್ನ ತಂಗಿ ರೋಹಿಣಿ ಫೋನ್ ಕಾಲ್ ಮಾತ್ರ ಮಿಸ್  ಆಗ್ತಾನೇ ಇರಲಿಲ್ಲ. ದಿನಾಲು ನಂಗೆ ಕಾಲ್ ಮಾಡ್ತಿದ್ಲು.  ಅವಳು ನನ್ನನ್ನ ಫೋಟೋದಲ್ಲಿ ನೋಡಿದ್ಲು, ನಾನು ಕೂಡ ಅಷ್ಟೇ.(ಆರ್ಕುಟ್ಟಿನಲ್ಲಿ). ನಾನು ಆಗ ಕೂದಲನ್ನು ಉದ್ದ ಬಿಟ್ಟಿದ್ದೆ, ಅದಕ್ಕೆ ಅವಳು ನನ್ನನ್ನು 'ಜುಟ್ಟು ಮಾವ' ಅಂತಾನು ಕರಿತಾ ಇದ್ಲು. ಎಷ್ಟೇ ನೋವಿದ್ದರೂ ಕೂಡ ನಗ್ತಾ, ನಗ್ತಾ ಮಾತಾಡ್ತಾ ಇದ್ಲು. ಹಾಗೆ ಕಥೆ, ಕವನ ಅಂತೆಲ್ಲ ಚೆನ್ನಾಗಿ ಬರೀತಾ ಇದ್ಲು. ನನಗೆ ತುಳು ಭಾಷೆ ಹೇಳಿ ಕೊಡ್ತಾ ಇದ್ಲು. ನನ್ನ ಹವ್ಯಕ ಭಾಷೆ ಅವಳಿಗೆ ಇಷ್ಟ. ಹಾಗೆ ಮಾತಾಡೋಕೆ ಪ್ರಯತ್ನ ಪಡ್ತಿದ್ಲು. ನಾನು ನನ್ನ ಮನೆಗೆ ಫೋನ್ ಮಾಡಿದಾಗ conference call ಹಾಕಿ ನಮ್ಮ ಹವ್ಯಕ ಭಾಷೆ ಅವಳಿಗೆ ಕೇಳಿಸ್ತಾ ಇದ್ದೆ.  ಒಮ್ಮೆ ನಾವು ಮೀಟ್ ಆಗೋಣ ಅಣ್ಣ ಮಂಗಳೂರಿಗೆ ಬನ್ನಿ  ಅಂತ ಹೇಳ್ತಾನೆ ಇದ್ಲು. ಕೆಲಸದ ನಡುವೆ ಬಿಡುವು ಮಾಡಿಕೊಂಡು ಹೋಗೋಕೆ ಆಗ್ತಾ ಇರಲಿಲ್ಲ.  ಇನ್ನು ಹೀಗೆ ಇದ್ರೆ ಆಗಲ್ಲ ಅಂತ ಒಂದು ಶುಕ್ರವಾರ ರಾತ್ರಿ  ಮಂಗಳೂರಿನ ಬಸ್ ಹತ್ತಿ ನನ್ನ ತಂಗಿ ನೋಡೋಕೆ ಹೊರಟೇ ಬಿಟ್ಟೆ.

ಮಂಗಳೂರಿನಲ್ಲಿ ನಾವು ಭೇಟಿ ಆದ್ವಿ. ತಿಂಡಿ, ಕಾಫಿ ಆಯ್ತು. ತುಂಬಾ ಮಾತಾಡಿದ್ವಿ. ಅವಳ ಅಮ್ಮ ಯಾರದ್ದೋ ನೆಂಟರ ಮನೆಗೆ ಹೋಗಿದ್ರಿಂದ ಅವರನ್ನ ಭೇಟಿ ಆಗೋಕೆ ಆಗಿಲ್ಲ.ನಾವು ಭೇಟಿ ಆದಾಗ ನಂಗೆ ಒಂದು gift ಕೊಟ್ಟಿದ್ಲು. ತುಂಬಾ ಚನ್ನಾಗಿದೆ ಅದು. ಪ್ರತೀ ವರ್ಷ ರಾಖಿ ಕಳಿಸ್ತಾ ಇದ್ಲು. ನಾನು ಯಾವುದನ್ನು ತುಂಬಾ ದಿನದಿಂದ ಹಂಬಲಿಸ್ತ ಇದ್ನೋ ಅದು ನಂಗೆ ಸಿಕ್ಕಿತ್ತು. ತಂಗಿ ಪ್ರೀತಿ ಅಂದ್ರೆ ಏನು ಅನ್ನೋದನ್ನು ಅವಳು ನನಗೆ ತಿಳಿಸಿದ್ಲು.

ಅವಳಿಗೆ ಮದುವೆ ಗೊತ್ತಾಯ್ತು. ನನಗೆ ಮದುವೆಗೆ ಹೋಗೋಕೆ ಆಗಿಲ್ಲ. ಅವಳ ಅಮ್ಮ, ಅವಳು, ತಮ್ಮ ಎಲ್ಲರೂ ನನಗೆ ಒಂದು ರೌಂಡ್ ಬೈದು ಕೂಡ ಆಯ್ತು. ಅವಳು ಮದುವೆ ಆದ ನಂತರ  ಮೊಬೈಲ್ ಮನೆನಲ್ಲೇ ಬಿಟ್ಟು (ತಮ್ಮನಿಗೆ ಕೊಟ್ಟು) ಗಂಡನ ಮನೆಗೆ ಹೋದಳು. ಆ ನಂತರ ಅವಳು ತೌರು ಮನೆಗೆ ಬಂದಾಗ ಮಾತ್ರ ಕಾಲ್ ಮಾಡ್ತಿದ್ಲು. ಆಗ ಅವಳ ಗಂಡನ ಜೊತೆ ಕೂಡ ಮಾತಾಡ್ತಾ ಇದ್ದೆ. ಅವಳ ತಮ್ಮ  (ಕೀರ್ತನ್) ದಿನಾಲು ಮೊಬೈಲ್ ನಿಂದ ಮೆಸೇಜ್ ಮಾಡ್ತಾ ಇದ್ದ. ರೋಹಿಣಿ ಮನೆಯಲ್ಲೇ ಇರೋದ್ರಿಂದ (house wife) ಆರ್ಕುಟ್, ಜಿ ಮೇಲ್ ಯಾವುದರಲ್ಲೂ ಸಿಕ್ತ ಇರಲಿಲ್ಲ. ಗಂಡನ ಮನೆ, ಅತ್ತೆ, ನಾದಿನಿಯರು, ಮೈದುನರು ಇವರೆಲ್ಲ ಈಗ ಅವಳ ಸಂಸಾರದಲ್ಲಿದಾರೆ. ನಾನು ಕೂಡ ಅದಕ್ಕೆ ಹೊಂದಿಕೊಂಡೆ. ಆದರೆ ನಾನು ಮಾತ್ರ ಅಮ್ಮ ಹಾಗು ತಮ್ಮನಿಗೆ ಆಗಾಗ ಕಾಲ್ ಮಾಡಿ ಮಾತಾಡ್ತಿದ್ದೆ. ರೋಹಿಣಿ ಬಗ್ಗೆ ಕೇಳ್ತಾ ಇದ್ದೆ. ಹೀಗಿದ್ದಾಗ ಒಮ್ಮೆ ಅವಳ ಮೊಬೈಲಿಗೆ ಕಾಲ್ ಮಾಡಿದರೆ, 'ನೀವು ಕರೆ ಮಾಡಿರುವ ಚಂದಾದಾರರು ಸ್ವಿಚ್ ಆಫ್ ಮಾಡಿದ್ದಾರೆ' ಅಂತ ಬಂತು. ಏನೋ ತೊಂದರೆ ಆಗಿ ಸ್ವಿಚ್ ಆಫ್ ಆಗಿರಬಹುದು ಅಂತ ನಾನು ಅನ್ಕೊಂಡೆ. ಒಂದು ವಾರದ ನಂತರ ಕರೆ ಮಾಡಿದರೂ ಕೂಡ ಅದೇ ಉತ್ತರ. ಆನಂತರ ರೋಹಿಣಿಯಿಂದ, ಕೀರ್ತನ್ ನಿಂದ, ಅಮ್ಮನಿಂದ ಆಗ್ಲಿ ಒಂದೇ ಒಂದು ಫೋನ್ ಎಲ್ಲಾ, ಮೆಸೇಜ್ ಇಲ್ಲ. ಒಟ್ಟಿನಲ್ಲಿ ಪೂರ್ತಿ ಬಿಟ್ಟೆ ಹೋಯಿತು. ಆಗ ಕೂಡ ನನಗೆ ನಾನೇ ಸಮಾಧಾನ ಹೇಳಿಕೊಂಡೆ, ಯಾವದೋ ತುರ್ತು ಸಂಧರ್ಭದಲ್ಲಿ ನಂಬರ್ ಬದಲಾವಣೆ ಮಾಡಿರಬೇಕು, ರೋಹಿಣಿ ಕಾಲ್ ಮಾಡೇ ಮಾಡ್ತಾಳೆ. ಒಂದೊಮ್ಮೆ ಕಾಲ್ ಮಾದಡಿದ್ರು ಪರವಾಗಿಲ್ಲ, ಬರುವ ರಾಖಿ ಹಬ್ಬಕ್ಕೆ ರಾಖಿ ಕಳುಹಿಸಿಯೇ ಕಳುಹಿಸುತ್ತಾಳೆ ಅದರ ಜೊತೆ ಅವಳ ವಿಳಾಸ, ಫೋನ್ ನಂಬರ್ ಎಲ್ಲದನ್ನು  ಕೊಟ್ಟು ಕಾಗದ ಬರೀತಾಳೆ ಅನ್ಕೊಂಡೆ. ರಾಖಿ ಹಬ್ಬ ಆಗಿ ಒಂದು ತಿಂಗಳಾದರೂ ಅವಳ ರಾಖಿಗೆ ಕಾಯ್ತಾ ಇದ್ದೆ. ದಿನಾಲು ಕೊರಿಯರ್ ಹಾಗು ಲೆಟರ್ ನಲ್ಲಿ ಅವಳದ್ದೆನಾದರು ಪತ್ರ ಇರಬಹುದೆಂಬ ನಿರೀಕ್ಷೆ ಇರ್ತಾ ಇತ್ತು.  ಆದರೆ ನನ್ನ ನಿರೀಕ್ಷೆ ಸುಳ್ಳಾಗಿತ್ತು. ಆದರೆ ನನ್ನ ಅಡ್ರಸ್ಸ್ ಮತ್ತು ಫೋನ್ ನಂಬರ್ ಮಾತ್ರ ಬದಲಾಗಿರಲಿಲ್ಲ. ಹೋದರೆ ಹೋಗಲಿ ಹೇಗೂ ಸೆಪ್ಟೆಂಬರ್ ನಲ್ಲಿ ನನ್ನ ಹುಟ್ಟು ಹಬ್ಬಕ್ಕಾದ್ರು ವಿಶ್ ಮಾಡೋಕೆ ಫೋನ್ ಮಾಡ್ತಾಳೆ ಅಂತ ಕಾಯ್ತಾನೆ ಇದ್ದೆ. ಅದು ಕೂಡ ಹುಸಿ ಆಯ್ತು. ಯಾರ್ಯಾರದೋ ಮುಖಾಂತರ ಅವಳಿಗೆ ಒಂದು ಮಗು ಆಗಿದೆ ಅಂತ ಗೊತ್ತಾಯಿತು. ಆದರೆ ಅವಳ ಈಗಿನ ವಿಳಾಸ ಪತ್ತೆ ಮಾಡೋದ್ರಲ್ಲಿ ನಾನು ಸೋತೆ.  ಅವಳ ಹಳೆಯ  ಮನೆಯ ವಿಳಾಸ ಹುಡುಕಿ ಕೊಂಡು ಹೋಗೋ ಅಷ್ಟು ನನಗೆ ಗೊತ್ತಿಲ್ಲ.


ನನಗೆ ಈ ತಂಗಿ ಪ್ರೀತಿ ಅನ್ನೋದು ಜೀವನ ಪೂರ್ತಿ ಸಿಗೋ ಅಷ್ಟು ಅದೃಷ್ಟ ಮಾಡಿಲ್ಲ ಅನ್ಸತ್ತೆ. ಅದಕ್ಕೆ ಈ ನಡುವೆ ಯಾರಾದರು ವಿನಿಯಣ್ಣ ಅಂತ ಮತಾಡ್ಸಿದ್ರೆ ಎಷ್ಟು ಖುಷಿ  ಆಗತ್ತೋ, ಅಷ್ಟೇ ಸಿಟ್ಟು, ಬೇಸರ ಕೂಡ ಆಗತ್ತೆ. ಅಣ್ಣ ಅಂತ ಹೇಳಿದ್ಮೇಲೆ ಅದನ್ನ ಅವರ ಜೀವನ ಪೂರ್ತಿ
ಉಳಿಸ್ಕೊಂಡು ಹೋಗ್ಬೇಕು ಅನ್ನೋದು ನನ್ನ ಸಲಹೆ. ಈಗ ಯಾರಾದ್ರೂ ಅಣ್ಣ ಅಂತ ಮಾತನಾಡ್ಸಿದ್ರೆ, ಹಾಗೆ ಕರಿಬೇಡಿ, ಫ್ರೆಂಡ್ಸ್ ಆಗೇ ಇರೋಣ ಅಂತ ಹೇಳ್ತೀನಿ. ಇದೆಲ್ಲದರ ನಡುವೆ ಕೆಲವು ದಿನದ ಹಿಂದೆ ನಮ್ಮ ಹವ್ಯಕ ಹುಡುಗಿ ಒಬ್ಬಳು ನಾನು ಹಾಕಿರೋ ಫೋಟೋ ಕಾಮೆಂಟ್ಸ್ ಗೆ 'Tanx vinayanna...'  ಅಂತ ಹೇಳಿ, ತಂಗಿ ಆಗಿದಾಳೆ. ಮತ್ತೆ ನನಗೆ ತಂಗಿ ಇದಾಳೆ ಅನ್ನೋ ಉತ್ಸಾಹ ತುಂಬಿದಾಳೆ. (*ಕರಾವಳಿ ಹುಡುಗಿ, ಇವಳು ಕೂಡ ಚೆನ್ನಾಗಿ ಕವನ, ಬ್ಲಾಗ್ ಬರೀತಾಳೆ. ಒಳ್ಳೆ ಫೋಟೋಗ್ರಫಿ ಕೂಡ ಮಾಡ್ತಾಳೆ. ಇಂಜಿನಿಯರಿಂಗ್ ಓದಿ, M.A. ಮಾಡ್ತಿದಾಳೆ.  ಅವಳ ಹೆಸರು....... ಅವಳನ್ನು ಕೇಳಿ ನಂತರ ಹೆಸರು ಹಾಕು ಅಂದ್ರೆ ಮಾತ್ರ ಇಲ್ಲಿ  ಹಾಕ್ತೀನಿ.) ಅದು ನಂಗೆ ಸಂತೋಷದ ವಿಷಯ. ಆದರೆ ಅವಳು ಅದನ್ನ ಹೇಗೆ ಉಳಿಸ್ಕೊತಾಳೆ  ಅನ್ನೋದನ್ನು ಕಾದು ನೋಡಬೇಕು. ಮತ್ತೊಮ್ಮೆ ಈ ಅಣ್ಣ, ತಂಗಿ ಬಂಧದಿಂದ ನೋವಾಗತ್ತೋ ಅಥವಾ ನಿಜವಾಗಿ ತಂಗಿ ಪ್ರೀತಿ ಕೊಟ್ಟು ನಲಿವು ತರ್ತಾಳೋ ಕಾದು ನೋಡ್ಬೇಕು. ಆದರೆ ನಮ್ಮಿಬ್ಬರ ನಡುವೆ ಅಷ್ಟೇನೂ ಹೇಳಿ ಕೊಳ್ಳುವಂತಹ communication ಇಲ್ಲ. ಆದರೂ ಇವಳು ಕೂಡ ನನಗೆ one of the favorite sister.  

ಅದೇನೇ ಇರಲಿ, ನನ್ನ ಕಂದಮ್ಮನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು. ಎಲ್ಲೇ ಇದ್ರು ಚೆನ್ನಾಗಿರಲಿ ಅಂತ ಆ ಕಾಣದ ದೇವರಲ್ಲಿ ಪ್ರಾರ್ಥಿಸಿಕೊಳ್ತೀನಿ.  ಈಗ ಮತ್ತೆ ಉದ್ದಕ್ಕೆ ಕೂದಲು ಬಿಟ್ಟಿದೀನಿ ಕಂದಮ್ಮ. ಮತ್ತೆ ನೀನು  'ಜುಟ್ಟು ಮಾವ' ಅಂತ ಕರೆಯಬಹುದು.  ನನ್ನ ರೋಹಿಣಿ ಮತ್ತೆ ನನ್ನ ಜೀವನಕ್ಕೆ ಬರ್ತಾಳೆ ಅನ್ನೋ ಆಸೆಯಿಂದ ಕಾಯ್ತಾ ಇರ್ತೀನಿ..

*ಮೇಲೆ ಹೇಳಿದ ಕರಾವಳಿ ಹುಡುಗಿಯ  ಹೆಸರು ಸೌಮ್ಯ ಭಾಗವತ್ ಅಂತ..

1 comment:

  1. ಇದೇ ರೀತಿಯ ಅನುಭವ ನನಗೂ ಆಗಿದೆ. ನಿಮ್ಮ ಲೇಖನ ಓದಿ ಅದೆಲ್ಲಾ ಮತ್ತೊಮ್ಮೆ ನೆನಪಾಯ್ತು.

    ReplyDelete